ಬೇಕರ್, ಹಾರ್ವೇ ಹಂಫ್ರಿ
1869-1915, ಅಮೆರಿಕದ ನ್ಯಾಯ ಶಾಸ್ತ್ರ ಪಂಡಿತ. ಬಾಲಾಪರಾಧಗಳಿಗೆ ಅನ್ವಯವಾಗುವ ನ್ಯಾಯ ಮತ್ತು ಅದರ ಆಡಳಿತಕ್ಕೆ ಹೊಸ ಹಾದಿ ಹಾಕಿಕೊಟ್ಟವರಲ್ಲಿ ಒಬ್ಬನೆಂದು ಪ್ರಸಿದ್ಧಿ. 1894ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಕಾನೂನು ಪದವೀಧರನಾದ. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಮಕ್ಕಳ ಸಮಸ್ಯೆಗಳನ್ನು ಕುರಿತು ಚಿಂತಿಸುತ್ತಿದ್ದ. ಬಾಸ್ಟನ್ನಿನ ಮಕ್ಕಳ ಸಹಾಯಾರ್ಥ ಸಂಘ ಸಂಸ್ಥೆಗಳು 1895ರಲ್ಲಿ ನಡೆಸಿದ ಸಮ್ಮೇಳನಕ್ಕೆ ಕಾರ್ಯದರ್ಶಿ ಆಗಿದ್ದ. ಆ ಸಮಯದಲ್ಲಿಯೇ ಬಾಲಾಪರಾಧಗಳ ಪ್ರಕರಣಗಳನ್ನು ಇತ್ಯರ್ಥ ಗೊಳಿಸಲು ಉಪಯುಕ್ತವಾಗುವಂತಹ ಒಂದು ಮಾದರಿ ಕೈಪಿಡಿಯನ್ನು ಸಿದ್ಧಗೊಳಿಸಿದ. ಬಾಲಾಪರಾಧಿಗಳ ನಿರೀಕ್ಷಣಾ ಸಂಸ್ಥೆಗಳ ಹಾಗೂ ದತ್ತಿ ಮತ್ತು ಸುಧಾರಕ ಸಂಸ್ಥೆಗಳ ಪ್ರಾರಂಭದ ಅಧ್ಯಕ್ಷನಾಗಿದ್ದ. ಬ್ರೂಕಲೈನ್ ನಗರಾಡಳಿತಕ್ಕೆ ಸೇರಿದ ನ್ಯಾಯಲಯದ ಕ್ಲಾರ್ಕ್ ಮತ್ತು ನ್ಯಾಯಧೀಶ ಹುದ್ದೆಗಳನ್ನು ಸುಮಾರು 11 ವರ್ಷಗಳ ಕಾಲ ವಹಿಸಿಕೊಂಡಿದ್ದ ಈತನನ್ನು 1906ರಲ್ಲಿ ಬಾಸ್ಟನ್ನಿನ ಬಾಲಾಪರಾಧಿಗಳ ವಿಚಾರಣಾ ನ್ಯಾಯಾಲಯದ ಪ್ರಥಮ ನ್ಯಾಯಾಧೀಶನಾಗಿ ನೇಮಿಸಲಾಯಿತು. 

	ಬೇಕರ್ ಯಾವುದೇ ಹೊಸ ಸಿದ್ಧಾಂತ ಅಥವಾ ಪದ್ಧತಿಯನ್ನು ಸೃಷ್ಟಿಸಿದ ಪ್ರಾಮುಖ್ಯ ಪಡೆದಿಲ್ಲವಾದರೂ ಆಗ ರೂಢಿಗತವಾಗಿದ್ದ ಸಾಮಾನ್ಯ ನ್ಯಾಯದಲ್ಲಿ, ಸಾಮಾಜಿಕ ನ್ಯಾಯ ಸಾಧನೆಯ ಉದ್ದೇಶದ ಈಡೇರಿಕೆಗೆ ಉಪಯುಕ್ತವಾಗುವಂತೆ ರೂಪಿಸಿದ ಮಾರ್ಪಾಡುಗಳಿಂದ ಪ್ರಸಿದ್ಧಿ ಪಡೆದ. ಈತನ ನ್ಯಾಯಾಡಳಿತದಲ್ಲಿ ಬಾಲಾಪರಾಧದ ಪ್ರಕರಣಗಳ ವಿಚಾರಣೆಯ ಮೂಲಬಿಂದು “ಅಪರಾಧ” ದ ಬದಲಾಗಿ “ಮಗು” ಆಗಿರುತ್ತಿತ್ತು. ಅಪರಾಧದ ಹಿನ್ನಲೆಯ ಘಟನೆಗಳು ಅಪರಾಧದ ನಿರ್ಣಯಕ್ಕೆ ಸಾಧಕವಾಗುವುದರ ಜೊತೆಗೆ ಮಗುವಿನ ಸುಧಾರಣೆಗೆ ಸಹಾಯಕವಾಗುವ ಸಾಧ್ಯತೆಯನ್ನು ಕಂಡುಹಿಡಿಯುವುದು ವಿಚಾರಣೆಯ ಉದ್ದೇಶವಾಗಿರುತ್ತಿತ್ತು. ಮಗುವಿನ ನಡತೆಗೆ ಮಾತಾಪಿತೃಗಳ ಹೊಣೆಗಾರಿಕೆ ಮತ್ತು ಅವರ ಸ್ಥಿತಿಗತಿಗಳ ಪಾತ್ರ ಇವನ್ನು ಕುರಿತು ಅವರ ನ್ಯಾಯಪ್ರಜ್ಞೆ ಎಚ್ಚರವಾಗಿರುತ್ತಿತ್ತು. ಉದ್ಯೋಗಸ್ಥ ಮಾತಾಪಿತೃಗಳ ಅನುಕೂಲದ ದೃಷ್ಟಿಯಿಂದ ಸಾಯಂಕಾಲದಲ್ಲಿ ನ್ಯಾಯಾಲಯದ ಕಾರ್ಯಕಲಾಪಗಳನ್ನು ನಡೆಸುತ್ತಿದ್ದ. ನ್ಯಾಯಧೀಶರಲ್ಲಿ ಇರಬೇಕಾದ ಹಲವು ವಿರಳ ಗುಣಗಳು ಈತನಲ್ಲಿದ್ದುವು. ಇತ್ಯರ್ಥಕ್ಕೆ ಬರುತ್ತಿದ್ದ ಪ್ರಕರಣಗಳ ಹಿನ್ನೆಲೆಗೆ ಸಂಬಂಧಿಸಿದ ಜನಜೀವನ ವಸ್ತು ಪರಿಸರಗಳ ಪರಿಚಯ ಪಡೆದುಕೊಂಡು ಅವನ್ನು ನಿರ್ಣಯ ಮಾಡುತ್ತಿದ್ದ. 

	ಬಾಸ್ಟನ್ನಿನ ಮಾನಸಿಕ ರೋಗದ ಆಸ್ಪತ್ರೆಯ ಸ್ಥಾಪನೆ ಮತ್ತು ಅದರ ಅಭಿವೃದ್ಧಿಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ. ಬಾಲಾಪರಾಧಗಳ ಸಂಬಂಧದಲ್ಲಿ ವೈಜ್ಞಾನಿಕ ವಿಧಾನಗಳ ಸಹಾಯ ಪಡೆಯಲು ಪ್ರಯತ್ನಿಸಿದ ಆಗಿನ ನ್ಯಾಯಾಧೀಶರಲ್ಲಿ ಈತ ಪ್ರಮುಖ. ಬಾಸ್ಟನ್ನಿನ ಬಾಲಾಪರಾಧಗಳ ನ್ಯಾಯಾಲಯದ ಪ್ರಥಮ ಪಂಚವಾರ್ಷಿಕ ವರದಿ ಪರಿಶೀಲಿಸಿದರೆ, ಈತನ ಸಂಶೋಧನಾ ಸಾಮಥ್ರ್ಯದ ದರ್ಶನವಾಗುತ್ತದೆ. ಬಾಲಾಪರಾಧದ ಸಮಸ್ಯೆಗಳನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಲು ಚಿಕಿತ್ಸಾ ಸ್ವರೂಪದ ಪ್ರಯೋಗಾಲಯ ಸ್ಥಾಪನೆ ಈತನ ಉದ್ದೇಶವಾಗಿತ್ತು. ಬೇಕರ್ ಬಾಸ್ಟನ್ನಿನ ಬಾಲಾಪರಾಧಿಗಳ ನ್ಯಾಯಾಲಯದ ಪ್ರಥಮ ನ್ಯಾಯಾಧೀಶನಾಗಿದ್ದಾಗಲೇ ನಿಧನ ಹೊಂದಿದ (1915). ಈತನ ಉದ್ದೇಶಗಳನ್ನು ಕಾರ್ಯಗತಗೊಳಿಸಲು ``ಜಡ್ಜ್ ಬೇಕರ್, ಫೌಂಡೇಶನ್ ಎಂಬ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. 
(ಎಲ್.ಎಸ್.ಜೆ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ